ಪ್ರಾರಂಭ ಪದದ ಹುಡುಕು
ಆಗಲೇಳು ಸಾಸಿರವು | ಮುಗಿಲು ಮುಟ್ಟುವಕೋಟೆ | ಹಗಲೆದ್ದು ಹತ್ತು ತಲೆಯಾತ ಪರಸತಿಯ | ನೆಗೆದು ತಾ ಕೆಟ್ಟ ಸರ್ವಜ್ಞ ||
ಆಗಿಯ ಹುಣ್ಣಿವೆ ಹೋದ | ಮಿಗೆ ಮೂರ ದಿವಸಕ್ಕೆ | ಮೃಗಧರನ ಕೂಡೆ ಮೃಗವಿರಲು ಮಳೆಗಾಲ | ಜಗದಣಿಯಲಕ್ಕು ಸರ್ವಜ್ಞ ||
ಆಗುಹೋಗುಗಳ ನೆರೆ | ರಾಗ ಭೋಗಗಳು | ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ | ಹೋಗಿಕ್ಕು ಕಾಣೊ ಸರ್ವಜ್ಞ ||
ಆಚಾರವಿಹುದೆಂದು | ಲೋಹಗುಂಡಿಗೆ ವಿಡಿದು | ಭೂಚರದಿ ಸತ್ತ ನವಿಲುಗರಿಪಿಡಿದಿರಲು | ನೀಚರೆನಿಸಿರರೆ ಸರ್ವಜ್ಞ ||
ಆಡದಲೆ ಮಾಡುವನು | ರೂಢಿಯೊಳಗುತ್ತಮನು | ಆಡಿ ಮಾಡುವನು ಮಧ್ಯಮನು | ಅಧಮ ತಾ | ನಾಡಿ ಮಾಡದವ ಸರ್ವಜ್ಞ ||
ಆಡಾದನಾ ಅಜನು | ಕೊಡಗನದಾದನು ಹರಿಯು ನೋಡಿದರೆ ಶಿವನು ನರಿಯಾದನೀ ಬೆಡಗೆ ರೂಢಿಯೊಳು ಬಲ್ಲೆ ಸರ್ವಜ್ಞ ||
ಆಡಿ ಅಳುಕಲು ಹೊಲ್ಲ | ಕೂಡಿ ತಪ್ಪಲು ಹೊಲ್ಲ | ಕಾಡುವಾ ನೆಂಟ ಬರಹೊಲ್ಲ ಧನಹೀನ | ನಾಡುವದೆ ಹೊಲ್ಲ ಸರ್ವಜ್ಞ ||
ಆಡಿ ನಳ ಕೆಟ್ಟ ಮ | ತ್ತಾಡಿ ಧರ್ಮಜ ಕೆಟ್ಟ | ಕೂಡಿದ ನಾಲ್ವರೂ ತಿರಿದುಂಡರೆ ನೆತ್ತವ | ನಾಡಬೇಡೆಂಬ ಸರ್ವಜ್ಞ ||
ಆಡಿ ಮರಗಲು ಹೊಲ್ಲ | ಕೂಡಿ ಕಾದಲು ಹೊಲ್ಲ | ಬೇಡನಾ ನಂಟು ತರವಲ್ಲ ಅವನ ಕುರಿ | ತಾಡುವದೆ ಹೊಲ್ಲ ಸರ್ವಜ್ಞ ||
ಆಡಿ ಹುಸಿಯಲು ಹೊಲ್ಲ | ಕೂಡಿ ತಪ್ಪಲು ಹೊಲ್ಲ | ಕಾಡುವಾ ನೆಂಟ ಬರ ಹೊಲ್ಲ ಸಟಿಯ | ನಾಡುವನೆ ಹೊಲ್ಲ ಸರ್ವಜ್ಞ ||
ಆಡಿಗಟ್ಟಣವೇಕೆ | ಬೋಡಂಗೆ ಕಬ್ಬೇಕೆ | ಕೋಡಗನ ಕೈಯ ಬಳೆಯೇಕೆ ಬಡವಂಗೆ | ನಾಡಮಾತೇಕೆ ಸರ್ವಜ್ಞ ||
ಆಡಿಗಡಿಕೆಯ ಹೊಲ್ಲ | ಗೋಡೆ ಬಿರುಕಲು ಹೊಲ್ಲ | ಒಡಕಿನಾ ಮನೆಯೊಳಿರ ಹೊಲ್ಲ ಬಡವಂಗೆ | ಸಿಡುಕು ತಾ ಹೊಲ್ಲ ಸರ್ವಜ್ಞ ||
ಆಡಿಗಳೆದ್ದೇಳವು | ನುಡಿಗಳೂ ಕೇಳಿಸವು ಮಡದಿಯರ ಮಾತು ಸೊಗಸದು ಕೂಳೊಂದು | ತಡೆದರರಗಳಿಗೆ ಸರ್ವಜ್ಞ ||
ಆಡಿದರೆ ಹಾಡುವದು | ಓಡಿ ಮರವನೇರುವದು | ಕೂಡದೆ ಕೊಂಕಿ ನಡೆಯುವದು ಹರಿದರದು | ಬಾಡದು ಸರ್ವಜ್ಞ ||
ಆಡುವವ ಕೆಟ್ಟಂತೆ | ನೋಡಹೋದವ ಕೆಟ್ಟ | ಬೇದುವವ ಕೆಟ್ಟ ನೆತ್ತವನು ಆಡುವನ | ಕೂಡಿದವ ಕೆಟ್ಟ ಸರ್ವಜ್ಞ ||